ಫಿಲಿಪ್ (ಅಮೆರಿಕದ)

	 ಸುಮಾರು 1639-1676. ಅಮೆರಿಕದ ವಾಂಪೆ ನೊವಗ್ ಇಂಡಿಯನ್ನರ ರಾಜ. ಮೆಸ್ಸಾಸೊಯಿಟ್‍ನ ಮಗ. ಮೆಸ್ಸಾಸೊಯಿಟನಿಗೆ ವಾಂಸುಟ್ಟ ಮತ್ತು ಮೆಟಕೊಮೆಟ್ ಎಂಬ ಇಬ್ಬರು ಮಕ್ಕಳಿದ್ದರು. ಅವರಿಗೆ ಇಂಗ್ಲಿಷರು ಅನುಕ್ರಮವಾಗಿ ಅಲೆಕ್ಸಾಂಡರ್ ಮತ್ತು ಫಿಲಿಪ್ ಎಂದು ನಾಮಕರಣ ಮಾಡಿದರು. ಅಣ್ಣ ಅಲೆಕ್ಸಾಂಡರ್ ಅಲ್ಪಕಾಲ ಆಳ್ವಿಕೆ ನಡೆಸಿ ಅಕಾಲ ಮರಣಕ್ಕೀಡಾದಾಗ ಫಿಲಿಪ್ ರಾಜನಾದ (1662). ಆಂಗ್ಲರು ತಮ್ಮ ವ್ಯವಹಾರಗಳಲ್ಲಿ ಮಧ್ಯಪ್ರದೇಶಿಸುವುದನ್ನು ಇಷ್ಟಪಡದ ರೆಡ್ ಇಂಡಿಯನ್ನರು ಪ್ಲೈಮೌತ್ ಮತ್ತಿತರ ಕಡೆಗಳಲ್ಲಿ 1675ರಲ್ಲಿ ದಂಗೆಯೆದ್ದರು; ಬಿಳಿಯರ ಕೊಲೆಗೆ ಕೈ ಹಚ್ಚಿದರು. ಫಿಲಿಪ್ ಅವರಿಗೆ ಆಶ್ರಯ ನೀಡಿದ. ಆದರೆ ಐರೋಪ್ಯ ಯುದ್ಧ ತಂತ್ರಕ್ಕೆ ಸಾಟಿಯಲ್ಲದ ಆಯುಧಗಳನ್ನು ಹೊಂದಿದ್ದ ಇಂಡಿಯನ್ನರು ಸೋಲುಗಳನ್ನು ಅನುಭವಿಸಬೇಕಾಯಿತು. ಸಂಚಿಗೊಳಗಾದ ಫಿಲಿಪನು ಹೋಪ್ ಪರ್ವತದ ಬಳಿ ಕೊಲೆಗೀಡಾದ. ಇವನ ತಲೆಯನ್ನು ಪ್ಲೈಮೌತ್‍ಗೆ ತಂದು ಎತ್ತರದ ಸ್ತಂಭಕ್ಕೆ ಸಿಕ್ಕಿಸಿ ಸಾರ್ವಜನಿಕ ಸ್ಥಳದಲ್ಲಿಡಲಾಯಿತು. ಆಂಗ್ಲರ ಆಧುನಿಕ ವಸಾಹತುಶಾಹಿಯ ತಂತ್ರಕ್ಕೆ ಬಲಿಯಾದ ದುರಂತನಾಯಕನಾಗಿ ಫಿಲಿಪ್ ಇತಿಹಾಸದಲ್ಲಿ ಪ್ರಸಿದ್ಧನಾಗಿದ್ದಾನೆ.    					
 
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ